ನಾನು ಅವನಿಗೆ 'ಸೊಳೆಮಗನೆ' ಅಂತ ಬೈದುದ್ದರಿಂದ ಬೇಜಾರ್ ಆಗಿದ್ದಕ್ಕಿಂತ ಅರ್ಥ ತಿಳಿಯದೆ ನುಡಿದಿದ್ದು, ಅವನಿಗೆ ಅದರ ಅರ್ಥ ತಿಳಿದಿದ್ದು ಹಾಗೂ ಅದೊಂದು ದೊಡ್ಡವರ ಪದವಾಗಿದ್ದು ಸಹ ಅದನ್ನು ನಾನು ಉಚ್ಚರಿಸಿದು ಅಪರಾಧ ಪರಮಾವಧಿಯಾಗಿ ಅವನಿಗೆ ಕಂಡುಬಂದ್ದಿತ್ತು.
ಸಿದ್ದರಾಮೇಶ, ಮೂರನೇ ತರಗತಿಯ, ವಿದ್ಯಾಭಾರತಿ ಶಾಲೆಯ ವ್ಯಾಸಂಗದಲ್ಲಿ ನನ್ನೊಡನೆ ಸಹಪಾಠಿಯಾಗಿ ಸೇರಿದನು. ಅವನು ಮೂರನೇ ತರಗತಿಯಲ್ಲಿ ಅಲ್ಲಿಗೆ ಬಂದು ಸೇರಿದ್ದ. ನಾನು ಮೊದಲಿಂದಲೂ ಅಲ್ಲೇ ಇದ್ದವನು. ಸಿದ್ದರಾಮೇಶ ಬಂದು ಸೇರಿದ ಸ್ವಲ್ಪ ದಿನದಲ್ಲಿ ಮುಖ್ಯವಾದ ಸ್ನೇಹಿತನಾದ. ಏಕಾಏಕಿ ನನ್ನ ಅಲ್ಲಿಯವರೆಗಿನ ಗೆಳೆಯ ಶಿವಕುಮಾರ ನಿಗಿಂತಲು ಸಿದ್ದರಾಮೇಶ ತುಂಬಾ ಮುಖ್ಯವಾಗಿ ಮಾರ್ಪಾಡು ಆಗಿದ್ದ. ಕಾರಣ ಶಿವಕುಮಾರ ನನ್ನಂತೆ ಒಬ್ಬ. ಸಿದ್ದರಾಮೇಶ ಮರವಂಜಿಗೂ ಚನ್ನಗಿರಿಗು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದ. ಆದ್ದರಿಂದ ಅವನಿಗೆ ಅಗಾಧವಾದ ಬಸ್ಸಿನ ಜ್ಞಾನ, ಎಂದರೆ ಚನ್ನಗಿರಿಯ ಅಂದಿನ ಸ್ಥಳೀಯ ಬಸ್ಸುಗಳ ಹೆಸರು ಮತ್ತು ಅವುಗಳ ಕಿಮ್ಮತ್ತು ಜನರ ಬಳಿ ಎಷ್ಟಿತ್ತೆಂದು ಅವನಿಗೆ ತಿಳಿದಿತ್ತು. ನಾನಂತೂ ಚನ್ನಗಿರಿ ಬಿಟ್ಟು ಆಕಡೆ ಈಕಡೆ ಅಂತ ಏನಾದರೂ ತಿರುಗಾಡಿದರೆ ಅದು ನಮ್ಮ ಮೂಲ ಊರು ಮುದಿಗೆರೆಗೆ. ಅದು ಚನ್ನಗಿರಿಯಿಂದ ಹತ್ತು ಕಿಲೋಮೀಟರ್ ಅಷ್ಟೆ. ಹಾಗೂ ಅದಕ್ಕೆ ತಲುಪಲು ಆಟೋ ಅಷ್ಟೇ ಗತಿ. ಒಂದು ಬಸ್ಸು ಇತ್ತು, ಮಹಾರುದ್ರಸ್ವಾಮಿ ಬಸ್ಸು. ಅದು ಮಾವಿನಹಳ್ಳಿಯಿಂದ ಚನ್ನಗಿರಿ, ಚಿಕ್ಕುಲಿಕೆರೆ, ಮುದಿಗೆರೆ, ಚನ್ನಹಳ್ಳಿ, ಹಿರೇಮಳ್ಳಿ ಮುಖೇನ ಮಾವಿನಕಟ್ಟೆ ಹೋಗುತ್ತಿತ್ತು. ಕ್ರಮೇಣ ಮಾವಿನಹಳ್ಳಿ ಇಂದ ಚನ್ನಗಿರಿಗೆ ಬಂದು ಮತ್ತೆ ಪುನಹ ಮಾವಿನಹಳ್ಳಿಗೆ ಮಾರ್ಗ ಬದಲಾವಣೆ ಮಾಡಿಕೊಂಡಿದ್ದರು. ಮುಖ್ಯ ಕಾರಣ ಜನ ಆಟೋವನ್ನು ಬಹಳ ಅವಲಂಬಿಸಿದ್ದರು, ಬಸ್ಸಿಗಾಗಿ ಕಾಯುತ್ತಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಬಸ್ಸು ಕೆಳ ಬಸ್ಟ್ಯಾಂಡಿನಲ್ಲಿ ಹಿರೆಮಳ್ಳಿಗೆ ಹೋಗುವವರಿಂದ ಅರ್ಧ ತುಂಬಿ ಹೋಗಿರುತ್ತಿತ್ತು. ನಮ್ಮವರು ಮೇಗಲ ಬಸ್ಟ್ಯಾಂಡಿನ ಮಂದಿ. ಕೆಳ ಬಸ್ಟ್ಯಾಂಡಿನಲ್ಲಿ ಕಟಿಂಗ್ ಮಾಡಿಸೋರಿಕೆ, ಕೆಳಗೆ ಯಾಕ್ ಕಟಿಂಗ್ ಮಾಡಿಸ್ಕೊತಿರ? ನಮ್ಮಂಗೆ ಮೇಲ್ ಕಟಿಂಗ್ ಮಾಡಿಸಿ ಅಂತ ಗೇಲಿ ಮಾಡುತ್ತಿದ್ದರು. ಅದೆಲ್ಲ ಇರಲಿ, ನನ್ನ ಬಸ್ಸಿನ ಜ್ಞಾನ ಶೂನ್ಯ. ಹಾಗಾಗಿ ನಮ್ಮ ಹೊಸ ಆಟವಾಗಿದಂತಹ 'ಬಸ್ಸ್-ಆಟಕ್ಕೆ' ನನ್ನ ಬಸ್ಸಿನ ಹೆಸರು ನೀಡಿದ್ದ ಸಿದ್ದರಾಮೇಶ ನನಗೆ ಅಮೂಲ್ಯವಾದ ವ್ಯಕ್ತಿಯಾಗಿದ್ದ. ಅವನು ಎಂ. ಆರ್.ಗೆ (ನನ್ನ ಹೆಸರಿನ ಇನಿಷಿಯಲ್ಸ್, ಎಂ. ಆರ್.) ಬೇಕಾದರೆ ನನ್ನ ಬಸ್ಸಿನ ಹೆಸರನ್ನು ಕೊಡುತ್ತೇನೆ. ಎಂ ಆರ್ ನೀನು 'ಸಿದ್ದರಾಮೇಶ್ವರ' ಬಸ್ ಅಂತ ಹೆಸರಿಟ್ಟುಕೊ ಎಂದಿದ್ದ. ಆಗ ಶಿವಕುಮಾರ ಬೇಡ 'ಅಪ್ಸರ' ಬಸ್ ಇಟ್ಕೋ ಎಂದಿದ್ದ. ಅದರ ಪ್ರತಿಯಾಗಿ ಸಿದ್ಧ, ಮಾಂಗ್ಲೆ ( ಮಾಂಗ್ಲೆ ಮಂಜು), ಜಿ ಎಸ್ ( ಜಿಎಸ್ ದರ್ಶನ್) ಎಲ್ಲರೂ ಬೇಡವೇಬೇಡ ಬರೀ ಗುದ್ದಿ ಗುದ್ದಿ ಜನರನ್ನು ಕೊಲ್ಲುತ್ತದೆ ಆ ಬಸ್ಸು; ಆಕ್ಸಿಡೆಂಟ್ ಗಾಡಿ ಅದು ಎಂದು ನಿರಾಕರಿಸಿದ್ದರು. ಆಗ ಸಿದ್ಧ, ಎಂ.ಆರ್ ಬೇಕಾದರೆ ಎಸ್.ಆರ್.ಇ ಇಟ್ಕೋ ಸೂಪರ್ ಗಾಡಿ ಎಂದಾಗ ಎಲ್ಲರೂ ಒಮ್ಮತದಿಂದ ಒಪ್ಪಿದ್ದರು. ಎಸ್.ಆರ್.ಇ ಎಂದರೆ ಹೈಕ್ಲಾಸ್ ಡಿಲಕ್ಸ್ ಗಾಡಿಗಳ ತರ ಇರುವ ಈಗಿನ ಎಸ್.ಆರ್.ಇ ಗಾಡಿಗಳಲ್ಲ. ಡಬ್ಬದ ಮೇಲೆ ಕೆಂಪು ಪಟ್ಟಿ ನೀಲಿ ಪಟ್ಟೆಗಳನ್ನು ಹೊಡೆದು ಕಲರ್ ಕಲರ್ ಆಗಿ ರೇಡಿಯಂ ಇಂದ ಡಿ. ಟಿ.ಹೆಚ್., ಡಿ. ವಿ.ಡಿ ಎಂದೆಲ್ಲಾ ಬರೆದ ಸಾಮಾನ್ಯ ವಿಶಿಷ್ಟ ಲೈನ್ ಬಸ್ಸುಗಳು. ಎಸ್.ಆರ್.ಇ ಸೂಪರ್ ಗಾಡಿ ಸಕ್ಕತ್ ನುಗ್ಗುತ್ತದೆ ಅಂತೆಲ್ಲ ಆಗಾಗ ಜಿ.ಎಸ್ ಎಲ್ಲರಿಗೆ ಹೇಳುತ್ತಿದ್ದಾಗ ಅದೊಂದು ಪ್ರತಿಷ್ಠೆಯ ಪ್ರತೀಕವಾಗಿ ನನಗೆ ಗೋಚರಿಸುತ್ತಿತ್ತು. ಹಾಗಾಗಿ ಸಿದ್ದರಾಮೇಶ ನನಗೆ ಪ್ರಮುಖ ವ್ಯಕ್ತಿಯಾಗಿ ಬದಲಾವಣೆ ಗೊಂಡಿದ್ದ. ನಾನು - ಎಸ್.ಆರ್.ಇ ಕೆಂಪು ಗಾಡಿ, ಸಿದ್ದ-ಸಿದ್ದರಾಮೇಶ್ವರ ಗಾಡಿ, ಜಿಎಸ್- ಅಪ್ಸರ ಗಾಡಿ, ಮಾಂಗ್ಲೆ-ಕೆಎಸ್ಆರ್ಟಿಸಿ ಗಾಡಿ, ಶಿವಕುಮಾರ ಎಸ್.ಆರ್.ಇ ನೀಲಿ ಗಾಡಿ. ದಿನ ಬಿಸಿಊಟ ಮುಗಿದ ತಕ್ಷಣ ನಮ್ಮ ಸಾರಿಗೆ ನಿಗಮ ಸೇವೆ ಶುರುವಾಗುತ್ತಿತ್ತು. ಹೀಗೆ ಒಂದು ದಿನ ಶಿವಕುಮಾರ ಹೇಳಿದ ಸತ್ಯ ನನಗೆ ಚಾಡಿಯಂತೆ ಕಂಡಿತ್ತು. ಜಿ.ಎಸ್ ಅಪ್ಸರಾ ಗಾಡಿ ಇಟ್ಕೊಳ್ಳೋ ದಕ್ಕೆ ಅದು ಸರಿಯಿಲ್ಲವೆಂದು ಹಾಗೂ ಸಿದ್ಧ ಕೊಟ್ಟ ಕೆಂಪು ಗಾಡಿ ನೆನ್ನೆ ಕೆಳ ಬಸ್ ಸ್ಟ್ಯಾಂಡಿನಲ್ಲಿ ಒಬ್ಬನಿಗೆ ಗುದ್ದಿದೆ ಅದು ಸರಿಯಿಲ್ಲವೆಂದು ಶಿವಕುಮಾರ ಹೇಳಿದ್ದ. ಶಿವಕುಮಾರನೆಗೆ ಅವನ ಎಸ್.ಆರ್.ಇ. ನೀಲಿ ಗಾಡಿ ನನ್ನ ಎಸ್.ಆರ್.ಇ ಕೆಂಪು ಗಾಡಿ ಎಂಬ ಏಕತೆಯು ಸ್ನೇಹದ ಕುರುಹಾಗಿತ್ತು. ನಾನು ಎಷ್ಟು ಬೇಡವೆಂದರೂ ಎಸ್.ಆರ್.ಇ ಎಂದು ಇಟ್ಟುಕೊಂಡ ಶಿವಕುಮಾರನ ಸ್ನೇಹದ ಕುರುಹನ್ನು ನನ್ನ ಸಾರ್ವಭೌಮತೆಗೆ ಆದ ದ್ದಕ್ಕೆ ಎಂಬಂತೆ ಅದನ್ನು ಪರಿಗಣಿಸಿದೆ. ಅದನ್ನು ನೇರವಾಗಿ ಹೇಳದಿದ್ದರೂ ನಾನು ಅದನ್ನು ಮನದಲ್ಲಿ ಇಟ್ಟುಕೊಂಡಿದ್ದೆ. ಹಾಗಾಗಿ ಶಿವು ಸತ್ಯ ಹೇಳಿದಾಗ ನಾನು ಅವನನ್ನು ಚಾಡಿ ಬುರುಕ ನೆಂದು ಬೈದು ಎಸ್.ಆರ್.ಇ ಇಟ್ಕೋಬೇಡ, ಮಾವಿನಹಳ್ಳಿ ಮಹಾರುದ್ರಸ್ವಾಮಿ ಗಾಡಿ ನೀನು ಎಂದು ಜೋರಾಗಿ ಹೇಳಿಬಿಟ್ಟಿದ್ದೆ. ಮಹಾರುದ್ರಸ್ವಾಮಿ ಗಾಡಿ ಒಂದು ಮಿನಿ ಬಸ್ಸು. ಆದ್ದರಿಂದ ನಮಗೆ ಅದರ ಹೆಸರು ಪಡೆಯುವುದು ಒಂದು ಅವಮಾನಕರ ಪದವಿ ಪಡೆದಂತೆ. ಇದನ್ನು ಸಹ ಸಿದ್ದನೆ ನಮ್ಮ ತಲೆಗೆ ತುಂಬಿದ್ದು. ಈ ಅವಮಾನವನ್ನು ತಡೆಯಲಾರದೆ ಶಿವಕುಮಾರ ನನಗೆ ಹೊಡೆಯೋದಕ್ಕೆ ಮೈಮೇಲೆ ಎರಗಿದ. ಒಂದೆರಡು ಕ್ಷಣ ಒಬ್ಬರನ್ನೊಬ್ಬರು ಹೊಡೆದಾಡಿಕೊಂಡೆವು. ಆಗ ಏಳನೇ ತರಗತಿಯ ಒಬ್ಬ ಹುಡುಗ ಬಂದು ಜಗಳ ಬಿಡಿಸಿದ. ಇಬ್ಬರನ್ನು ದೂರ ದೂರ ಕಳಿಸಿದ. ನಂತರ ಊಟದ ನಂತರದ ಗಂಟೆ ಬಾರಿಸಿತು ಎಲ್ಲರೂ ಸಹ ತರಗತಿಗೆ ಬಂದು ಕುಳಿತವು. ನನಗೂ ಶಿವನಿಗೂ ಸಮಾನ ಗಾಯವಾಗಿದ್ದರಿಂದ ಇಬ್ಬರಿಗೂ ಒಂದೇ ರೀತಿಯ ಒಂದೇ ತೂಕದ ಮರ್ಯಾದೆ ಅಂದಿನ ಸಂಜೆಯವರೆಗೆ ಸಿಕ್ಕಿತ್ತು. ಇದರಿಂದ ನಾವಿಬ್ಬರೂ ಗೊತ್ತಿಲ್ಲದೆ ಮತ್ತೆ ಒಂದಾಗಿದ್ದೆವು. ಅಂದು ಗ್ರಹಚಾರ ಕೆಟ್ಟಿದ್ದು ಆ ಏಳನೇ ತರಗತಿಯ ಹುಡುಗನದ್ದು. ಶಾಲೆ ಬಿಟ್ಟ ಮೇಲೆ ಸಂಜೆ ಎಲ್ಲಾ ಬಸ್ಸಿಗೆ ಹೋಗುವ ಹುಡುಗರನ್ನು ಕೆಳ ಬಸ್-ಸ್ಟ್ಯಾಂಡಿಗೆ ಹೋಗಿ ಬಿಟ್ಟು ಬರುವುದು ನಮ್ಮ ರೂಡಿಯಾಗಿತ್ತು. ನಾನು ಶಿವು ಒಟ್ಟಿಗೆ ಒಂದೇ ದಾರಿಯಲ್ಲಿ ಶಾಲೆಗೆ ಬರುವುದು ಹಾಗೂ ಮನೆಗೆ ಹೋಗುವುದು ಕಳೆದ ನಾಲ್ಕು ವರ್ಷದಿಂದ ಜಾರಿಯಲ್ಲಿತ್ತು. ಅಂದು ಸಂಜೆ ನಮ್ಮಿಬ್ಬರನ್ನು ಒಟ್ಟಿಗೆ ನೋಡಿದ ಏಳನೇ ತರಗತಿಯ ಹುಡುಗ, ತಾನು ಬೇರೆ ಮಾಡಿದರೂ ಇವರಿಬ್ಬರು ಹೇಗೆ ಒಟ್ಟಿಗಿರುವರು ಎಂದು ಗರಂ ಆಗಿ ತಡೆದು ನಿಲ್ಲಿಸಿ ನಮ್ಮನ್ನು ಗಡಸು ಒಡಕು ಧ್ವನಿಯಿಂದ ಪ್ರಶ್ನಿಸಿದ. ನನಗೆ ಕೋಪ ಬರದೇ ಹೋದರೂ ಇದೆಲ್ಲ ನಮ್ಮಿಷ್ಟ ಎಂದು ವಾದಿಸುತ್ತಿದ್ದ ಹಾಗೆ ಶಿವಕುಮಾರ ನನ್ನ ಸಾತ್ ಕೊಡುತ್ತಿದ್ದ. ಅದರಿಂದ ಕುಪಿತನಾದ ಅವನು, ಇದಕ್ಕೆ ನಿನ್ನನ್ನು ಆ ಡಕೋಟ ಮಿನಿ ಬಸ್ಸಿಗೆ ಹೋಲಿಸಿರುವುದು ಇವರೆಲ್ಲರೂ ಎಂದು ಶಿವಕುಮಾರನನ್ನು ಅವಮಾನಿಸಿದ. ನನಗೆ ಆಗ ನಿಜವಾಗಲೂ ಕೋಪ ಬಂದಿತು ಅವನನ್ನು ಜೋರಾಗಿ ತಳ್ಳುತ್ತಾ ಇದೆಲ್ಲಾ ನಿನಗ್ಯಾಕೋ ಎಂದು ಕಿರುಚಿದೆ ಯಾಕೋ ಸಾಕಾಗಲಿಲ್ಲ ಎಂದೆನಿಸಿ ಒಂದೆರಡು ಸೆಕೆಂಡ್ ಒಳಗಡೆ 'ಸೂಳೆಮಗನೆ' ಎಂದುಬಿಟ್ಟೆ. ಇದೊಂದು ಮಹಾಪಾಪವೆಂದು ಅವನು ವಾದ ಮಂಡಿಸುತ್ತಾ ಚಿಕ್ಕವರಿಂದ ಆದ ಅವಮಾನವನ್ನು ತಡೆಯಲಾಗದೆ ನನಗೆ ಹೊಡೆಯಲು ಬಂದ. ಅಲ್ಲೇ ಇದ್ದ ಅಂಗಡಿಯವರು ಅವನಿಗೆ ಬಯ್ದು ಉಪ್ಪು-ಖಾರ ಹಾಕುಲು ಶುರು ಮಾಡಿದರು. ಅವರು ನಮಗೆ ಕ್ಲಾಸ್ ತೆಗೆದುಕೊಳ್ಳುವುದಕ್ಕಿಂತ ಮುಂಚೆನೆ ಎಲ್ಲರೂ ಅಲ್ಲಿಂದ ಒಟ್ಟಿಗೆ ಹೋಗಿಬಿಟ್ಟವು. ನಂತರ ಅಂದು ಬೇರೆ ದಾರಿಯಲ್ಲಿ ಅಲ್ಲಿಂದ ಮನೆಗೆ ಹೋಗುತ್ತಿರುವಾಗ ಸೂಳೆಮಗ ಎಂದರೆ ಅವರ ಅಮ್ಮನಿಗೆ ಬೇರೆ ಗಂಡ ಇದ್ದಾನೆ ಅಂತ ಜಿ.ಎಸ್ ಹೇಳಿದ್ದು ನನಗೆ ಕರ್ಮ ಅನಿಷ್ಠ ಎಂದೆಲ್ಲ ಅನ್ನಿಸಿತ್ತು. ನಾನೇನೊ ಮಹಾಪಾಪ ಮಾಡಿರುವೆನು ಎಂದು ಭಾಸವಾಗುತ್ತಿದ್ದರೂ ಅದು ಅನೇಕ ದಿನಗಳವರೆಗೂ ಉಳಿಯಲಿಲ್ಲ ಮುಂದೆ ಸೂಳೆಮಗ ಅನ್ನೋದು ಒಂದು ರೀತಿ ಹೊಸ ಪ್ರವೃತ್ತಿಯಾಗಿ ಆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ